ಈ ಬ್ಲಾಗಿನಲ್ಲಿ ಪ್ರೇಮ,ಕಾಮ,ಅಸಹ್ಯ,ಚಿಂತಕ,ನೋವು,ನಲಿವು,...ಎಲ್ಲವನ್ನು ಒಳಗೊಂಡ ಕಣ್ಣೀರು ಹರಿದಾಡುತ್ತದೆ..

ಭಾನುವಾರ, ನವೆಂಬರ್ 1, 2009

ಓ ಕನ್ನಡವೇ..

"ಸಿರಿಗನ್ನಡಂ ಗೆಲ್ಗೆ" "ಜೈ ಕರ್ನಾಟಕ ಮಾತೆ" "ಸಿರಿಗನ್ನಡಂ ಬಾಳ್ಗೆ"

ಸಮಸ್ತ ಕನ್ನಡ ಕುಲಕೋಟಿಗೆ 'ಕನ್ನಡ ರಾಜ್ಯೋತ್ಸವದ ಶುಭಾಶಯಗಳು'.

[ಸೂಚನೆ:೧)ತನ್ನ ಆದರ್ಶಗಳನ್ನು ಮಾರಿಕೊಳ್ಳದ ಕರುನಾಡ ಜನತೆಯಲ್ಲಿ ನೀವೊಬ್ಬರಾಗಿದ್ದರೆ ನೀವು ಈ ಬರಹವನ್ನು ಸಂಪೂರ್ಣವಾಗಿ ಓದಬೇಕು.. ಇಲ್ಲವಾದಲ್ಲಿ ದಯವಿಟ್ಟು ಓದಲು ಪ್ರಾರಂಭ ಮಾಡುವುದೇ ಬೇಡ.
೨)ಇಲ್ಲಿ ಪ್ರಸ್ತಾಪಿಸಿರುವ ವಿಷಯ ಹೀಗಾಗಲೇ ತಿಳಿದಿರುವ ವಿಷಯ ಆಗಿರಬಹುದು ,ಆದರೆ ನನಗೆ ಬರೆಯಬೇಕೆಂದು ಅನಿಸಿರುವುದರಿಂದ ಬರೆಯುತ್ತಿದ್ದೇನೆ..ಇದೇನು ನಿಮಗೆ ಹೊಸದಲ್ಲ ಎನಿಸಬಹುದು.
೩)ಈ ಬರಹವು ಯಾವುದೇ ವ್ಯಕ್ತಿಗೆ ಬೇಕಾದರೂ ಹೋಲಿಕೆಯಾಗಬಹುದು.]

ಇಲ್ಲಿ ನನಗೆ ಮೂಡಿರುವ ಪ್ರಶ್ನೆ...
ಪಂಚಕೋಟಿ ಕರುನಾಡಿನವರಲ್ಲಿ ಕನ್ನಡಿಗರೆಷ್ಟು?

ಪುಣ್ಯಭೂಮಿ ಕರುನಾಡಲ್ಲಿ ಜನ್ಮತಳೆದು,ಇಲ್ಲಿನ ಸಂಪತ್ತಿನಿಂದಲೇ ಬದುಕಿ,ಇಲ್ಲೇ ಹತರಾಗಬೇಕಾದ ಕೋಟ್ಯಾನುಕೋಟಿ ಮಕ್ಕಳು ನಮ್ಮ ಕನ್ನಡ ತಾಯಿಗೆ ಇದ್ದಾರೆ..ಆದರೆ ಅವರಲ್ಲಿ ಕೆಲವರು ಮಾತ್ರ ನಿಜವಾದ ಕನ್ನಡಿಗರು ಎಂದು ನನ್ನ ಅನಿಸಿಕೆ...


ಇನ್ನುಳಿದ ಹಲವಾರು ಮಹಾಶಯರು ತಾವು ಕನ್ನಡದವರು ಎಂಬುದನ್ನು ಮರೆತು ತಮ್ಮ ಮಕ್ಕಳು ಕನ್ನಡ ಕಲಿಯಲು "ಅಮ್ಮಾ" ಎಂದು ಓಂಕಾರ ಹಾಕುವ ಮುನ್ನವೇ ಅವರನ್ನು ಆಂಗ್ಲದ ಮಡಿಲಲ್ಲಿ ಹಾಕಿ 'ಮಮ್ಮಿ' ಎಂದು ಹೇಳಿಸಿ (ಇನ್ನೊಂದು ರೀತಿಯಲ್ಲಿ ಅವರ ಕನ್ನಡಾಭಿಮಾನವನ್ನು ಮಮ್ಮಿ (ಶವ)ಮಾಡಿ )ಆಂಗ್ಲ ಕಲಿಯಲು ಓಂಕಾರ ಹಾಕಿಸಿಬಿಡುತ್ತಾರೆ.. ಹಾಗೆ ಬೆಳೆದ ಮಕ್ಕಳು ಮುಂದೆ 'ಕನ್ನಡ' ತಮ್ಮ ಮಾತೃಭಾಷೆ ಎಂಬುದನ್ನು ಮರೆತು ಕನ್ನಡದ ಬಗ್ಗೆ ತಾತ್ಸಾರ ಹೊಂದುತ್ತಾರೆ.. ಅವರು ವಯಸ್ಕರಾದಂತೆ ಅವರಿಗೆ ಕನ್ನಡ ಅಲರ್ಜಿ ಆಗಿಬಿಡುತ್ತದೆ.. ಶಾಲಾ ಕಾಲೇಜಿನಲ್ಲಿ ಕನ್ನಡ ತರಗತಿ ಎಂದರೆ ಜಿಗುಪ್ಸೆ ಬರುವಂತಾಗುತ್ತದೆ.. ಮುಂದೆ ಮುಂದೆ ಹೋದಂತೆ ಕೆಲ ಉನ್ನತ ಶಿಕ್ಷಣದಲ್ಲಿ ಕನ್ನಡ ವಿಷಯವೇ ಇರುವುದಿಲ್ಲ.. ಚಲಚಿತ್ರಗಳ ವಿಷಯದಲ್ಲೂ ಕೂಡ ಕನ್ನಡಕ್ಕಿಂತ ಆಂಗ್ಲವೇ ಅವರಿಗೆ ಅಚ್ಚುಮೆಚ್ಚಾಗಿ ಪರಿಣಮಿಸುತ್ತದೆ.. ಕನ್ನಡವನ್ನು ಉತ್ತೀರ್ಣವಾಗಲು ಮಾತ್ರ ಓದಬೇಕು ಎಂಬ ಮನೋಜ್ಞಾನ ಅವರಲ್ಲಿ ಮೂಡುತ್ತದೆ... ಕನ್ನಡದ ಜನರು,ಕನ್ನಡದ ಕಾರ್ಯಕ್ರಮಗಳು,ಕನ್ನಡ ಮಾತು ಅವರಿಗೆ ಬೇಸರವೆಂದೆನಿಸುತ್ತದೆ... ಅನಾವಶ್ಯಕವಾಗಿ ಆಂಗ್ಲ ಬಳಸಿ ಕನ್ನಡವನ್ನೇ ಮರೆತುಬಿಡುತ್ತಾರೆ.. ಇಂಥ ಮಕ್ಕಳು ಹುಟ್ಟುವಾಗ ಕನ್ನಡಮ್ಮನ ಮಕ್ಕಳಾಗಿ ಹುಟ್ಟಿದರೂ ಬೆಳೆಯುವುದು ಮಾತ್ರ ಆಂಗ್ಲದ ಪೋಷಣೆಯಲ್ಲಿ..

ಈ ಮಕ್ಕಳನ್ನು ಈ ಸ್ಥಿತಿಗೆ ತಂದ ಜನ್ಮಜರಲ್ಲಿ ಕೆಲವರಂತೂ 'ಕನ್ನಡಿಗ' ಎಂಬ ಹಣೆಪಟ್ಟಿ ಧರಿಸಿ ಕನ್ನಡದ ಸಂಘಟನೆಗಳಲ್ಲಿ ಕನ್ನಡದ ಬಗ್ಗೆ ಮಾತನಾಡುತ್ತಿರುತ್ತಾರೆ... ನಿಮ್ಮ ಮಕ್ಕಳನ್ನು ಮಾತ್ರ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿ ಮಾತೃಭಾಷೆ ಕಲಿಸಿರುವುದರ ಕಾರಣ ಕೇಳಿದರೆ ನಮ್ಮ ಮಕ್ಕಳು ಚೆನ್ನಾಗಿ ಓದಿ ಮುಂದೆ ಡಾಕ್ಟರ್/ಎಂಜಿನಿಯರ್ ಆಗಬೇಕು,ಅದಕ್ಕೆ ಮೂಲ ಆಂಗ್ಲ ಭಾಷೆ ಚೆನ್ನಾಗಿರಬೇಕು... ಎಂದೆನ್ನುತ್ತಾರೆ.. ಅದೂ
ಅಲ್ಲದೆ ತಮ್ಮ ಮಕ್ಕಳು ಹಾಗಾದ್ದಲ್ಲಿ ಕನ್ನಡಕ್ಕೆ ಕೀರ್ತಿ ತಾನೇ! ಎನ್ನುತ್ತಾರೆ?


ಏಕೆ... ಕನ್ನಡ ಮಾಧ್ಯಮದಲ್ಲಿ ಓದಿ ಮಾತೃಭಾಷೆಯನ್ನೂ ಕಲಿತು ಮುಂದೆ ವೈದ್ಯ/ತಂತ್ರಜ್ಞ ರಾಗಿರುವವರಿಲ್ಲವೇ?

ಅವರ ತಂದೆತಾಯಿಯರನ್ನು ಬಿಡಿ ಮಕ್ಕಳಾದರೂ ದೊಡ್ಡವರಾದಮೇಲೆ ತಮ್ಮ ಮಾತೃಭಾಷೆಯ ಬಗ್ಗೆ ತಿಳಿಯಬೇಕು ಅದನ್ನೇ ಬಳಸಬೇಕು,ಅದನ್ನು ಪ್ರೀತಿಸಿ ಬೆಳೆಸಬೇಕು ಎಂಬ ಮನೋಜ್ಞಾನ ಬೆಳೆಸಿಕೊಳ್ಳಬೇಡವೇ..?
ಬಿಡಿ ಕೆಲ ಮಕ್ಕಳಿಗೂ ಅದು ಬೇಕಿರುವುದಿಲ್ಲ .. ಅವರು ಹೆಸರಿಗೆ ಮಾತ್ರ ಕನ್ನಡದವರು ಇನ್ನೆಲ್ಲವೂ ಆಂಗ್ಲಮಯ.. ಅವರನ್ನು
ಪ್ರಶ್ನಿಸಿದರೆ, ಹಾಗಾದರೆ ಕರ್ನಾಟಕದಲ್ಲಿ ಎಲ್ಲರೂ ಕನ್ನಡವನ್ನು ಪ್ರೀತಿಸುವವರೇ ಇದ್ದಾರೆಯೆ? ಎಂಬ ತರ್ಕವಿಲ್ಲದ ಉತ್ತರ ನೀಡುತ್ತಾರೆ. ಅದು ಸರಿಯೇ ಅನ್ನಿ ಕರ್ನಾಟಕದ ಈಗಿನ ಪರಿಸ್ಥಿತಿಯೂ ಹಾಗೆ ಇದೆ.. ಎಲ್ಲವೂ ಆಂಗ್ಲಮಯ.. ಪರಿಸ್ಥಿತಿಯೇ ಹೀಗಿರುವಾಗ ಕನ್ನಡದ ಸ್ಥಿತಿ ಕೇಳಬೇಕೆ..?


ಇನ್ನು ಕನ್ನಡದ ಜನತೆ... ಕೆಲವು ಹಳ್ಳಿಗಾಡಿನ ಪ್ರದೇಶಗಳನ್ನು ಬಿಟ್ಟರೆ(ಅಲ್ಲೂ ಕೂಡ ಕನ್ನಡ ಮತ್ತು ಆಂಗ್ಲ ಮಿಶ್ರಿತವಾಗಿ ಬಳಕೆಯಾಗುತ್ತಿದೆ) ನಗರ ಪ್ರದೇಶದ ಜನರಂತೂ ಕನ್ನಡವನ್ನು ಮರೆತೇಬಿಟ್ಟಿದ್ದಾರೆ... ಆಂಗ್ಲವನ್ನು ಚೆನ್ನಾಗಿ ಅರಿತ ಜನರಿಗೆ ಹಳ್ಳಿಗಾಡಿನ ಕನ್ನಡಿಗರ 'ಕನ್ನಡ ಭಾಷೆ' ಇಷ್ಟವಿಲ್ಲ.. ಅವರಿಗೆ ಆಂಗ್ಲ ಮಾತನಾಡುವವರನ್ನು ಕಂಡರೆ ಅಚ್ಚುಮೆಚ್ಚು..(ಎಷ್ಟೇ ಆದರೂ ಹೊತ್ತ ಕನ್ನಡ ತಾಯಿಗಿಂತ ಸಾಕಿದ ಆಂಗ್ಲವೇ ಮುಖ್ಯವೆನಿಸಿತೇನೋ?) ಹೀಗಾದಾಗ ಹಳ್ಳಿಯ ಆಂಗ್ಲ ಬರದ ಜನರು ಆಂಗ್ಲ ಬರುವ ಜನರ ಮುಂದೆ ತಲೆತಗ್ಗಿಸಲಾಗದೆ ಆಂಗ್ಲ ಕಲಿಯಲು ಮುಂದಾಗಿ ಕನ್ನಡ ಮರೆಯುತ್ತಾರೆ.. ಆಂಗ್ಲ ಮೆರೆಸುತ್ತಾರೆ.. ಹೀಗಾಗಿ ಕರ್ನಾಟಕದಲ್ಲಿ ಕನ್ನಡ ಬಂದರೂ ಕನ್ನಡ ಮಾತನಾಡಲೂ ಇಚ್ಚಿಸದ ಜನರಿದ್ದಾರೆ.. ಕನ್ನಡನಾಡಿನಲ್ಲಿ ಸಮೃದ್ಧವಾಗಿ ಬದುಕಬೇಕಾದರೆ ಕನ್ನಡ ಮರೆಯಬೇಕು ಎಂಬ ಸ್ಥಿತಿ ತಲುಪುತ್ತಾರೆ..ಕೇವಲ ಕನ್ನಡ ಕಲಿತಿರುವ ಜನರು ಮುಂದೆ ಜೀವನೋದ್ಧಾರಕ್ಕೆ ಆಂಗ್ಲದಲ್ಲಿ ಪರಿಣಿತರಾಗಲೆಬೇಕಾದ ಪರಿಸ್ಥಿತಿ ಇದೆ.. ತಮ್ಮ ನಾಡು,ಭಾಷೆ.. ಎಂದು ಅರಿವಿರುವ ಜನರೇ ಹೀಗಿರುವಾಗ ಹಳ್ಳಿಗಾಡಿನಲ್ಲಿ ಕೇಳಬೇಕೆ? ಅಲ್ಲಿನ ಆಂಗ್ಲ ಎಂದರೇನು ಎಂದು ತಿಳಿಯದವರು ಕೂಡ ತಮ್ಮ ಮಕ್ಕಳು ಆಂಗ್ಲ ಕಲಿಯಲೆಂದು ಇಚ್ಛೆ ಪಟ್ಟು ಆಂಗ್ಲ ಕಲಿಯಲು ಬಿಡುತ್ತಾರೆ,ತಮ್ಮ ಮಗು ಒಂದೆರಡು ಆಂಗ್ಲ ಪದ ಕಲಿತರೆ ಅದೇ ಅವರಿಗೆ ಖುಷಿಯ ವಿಷಯ.. ಅವರಿಗೂ ತಮ್ಮ ಮಗು ಆಂಗ್ಲ ಮಾಧ್ಯಮ ಶಾಲೆಯಲ್ಲೇ ಓದಬೇಕೆಂಬ ಆಸೆ..
ಹೀಗಾಗಿ ಕನ್ನಡದಲ್ಲಿರುವ ಕನ್ನಡದ ಮುತ್ತು ಮಣಿಗಳೂ ಕನ್ನಡದ ಮಣ್ಣಿನಲ್ಲಿ ಕನ್ನಡವೇ ಹೂತುಹೋಗುತ್ತಿರುವುದ ನೋಡಿ ಕಂಬನಿ ಮಿಡಿಯುತ್ತಾರೆ...


ಸಂಪರ್ಕ ಸಾಧನವಾದ ಚಲನ ದೂರವಾಣಿ (ಮೊಬೈಲ್ ಫೋನ್ )ಅನ್ನೇ ತೆಗೆದುಕೊಳ್ಳಿ.. ಎಷ್ಟು ರೀತಿಯಲ್ಲಿ ಅವು ನಮಗೆ ಕಾಣಸಿಗುತ್ತವೆ, ಆದರೆ ಕನ್ನಡ ಅಕ್ಷರಕ್ಕೆ ಸ್ಪಂದಿಸುವ ಚಲನ ದೂರವಾಣಿ ಒಂದೆರಡು ಅಷ್ಟೆ..
ಅವುಗಳನ್ನು ಉಪಯೋಗಿಸುವ ಕನ್ನಡ ಜನರಿಗೆ ಕನ್ನಡದಲ್ಲಿ ಸಂದೇಶ ರವಾನೆಗೆ ಅವಕಾಶವೇ ಇಲ್ಲ.. ಕನ್ನಡದ ಹಬ್ಬದ ಶುಭಾಶಯ ಕೂಡ ಆಂಗ್ಲದಲ್ಲೇ ತಲುಪಿಸುತ್ತಾರೆ..

ಇನ್ನೂ ಕೆಲ ವಿಷಯಗಳಂತೂ .... ! ಕನ್ನಡ ಪಾಠ ಹೇಳುವ ಕೆಲ ಕನ್ನಡ ಉಪನ್ಯಾಸಕರಿಗೆ ಕನ್ನಡ ಸರಿಯಾಗಿ ಬರುವುದಿಲ್ಲ... ಕೆಲ ಕನ್ನಡ ಉಪನ್ಯಾಸಕರು ಮಾತನಾಡುವುದು ಕೇವಲ ಆಂಗ್ಲದಲ್ಲಿ(ಅವರಿಗೆ ಕನ್ನಡ ಬರುತ್ತೋ.. ಅಥವಾ ಬೇಕೆಂತಲೇ ಆಂಗ್ಲ ಮಾತನಾಡುತ್ತಾರೋ? ತಿಳಿಯದು).. ಕನ್ನಡದಲ್ಲಿ ವಾಹನಗಳಿಗೆ ಸಂಖ್ಯೆ ಬರೆಯಿಸಿದರೆ ಓದಲು ಬಾರದ ಕೆಲ ಸಂಚಾರ ನಿಯಂತ್ರಣ ರಕ್ಷಕರೂ ಇದ್ದಾರೆ.. ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಧ್ವಜ ಹಾರಿಸುವವರಿಗೆ ಸಂಪೂರ್ಣ ಕನ್ನಡ ಬಾರದೆಯೂ ಇರಬಹುದೆಂದು ನನ್ನ ಅನಿಸಿಕೆ....

ಒಂದು ನಾಡಿನಲ್ಲಿ ಆ ನಾಡಿನ ಭಾಷೆಯ ಶಾಲೆಗಳು ಹೆಚ್ಚಾಗಿರಬೇಕು.. ಕನ್ನಡ ಭೂಮಿಯಲ್ಲಿ ಕನ್ನಡ ಶಾಲೆಗಳಿಗಿಂತ ಆಂಗ್ಲ ಶಾಲೆಗಳೇ ಹೆಚ್ಚಿವೆ ... ಕೇವಲ ಕನ್ನಡ ಕಲಿತಿರುವ ಜನರು ಮುಂದೆ ಜೀವನೋದ್ಧಾರಕ್ಕೆ ಆಂಗ್ಲದಲ್ಲಿ ಪರಿಣಿತ ಆಗಲೇಬೇಕಾದ ಪರಿಸ್ಥಿತಿ ಇದೆ..

'ಕನ್ನಡ ನನ್ನ ಉಸಿರು','ಕನ್ನಡವೇ ಸತ್ಯ ಕನ್ನಡವೇ ನಿತ್ಯ','.......ಮುಂತಾದ ಕನ್ನಡ ಬರಹಗಳು.. ಇಂಥ ಮಾತಾಡುವ ಜನರೆಂದರೆ ನಕ್ಕು ಬಿಡುವ ಈ ನಾಡಲ್ಲಿ 'ಮಾತೃ ಪ್ರೇಮ' ಉಕ್ಕಿಸುವೆ ಎಂದು ಹೇಳುವವನು ಹುಚ್ಚನಾಗಬಹುದು..

ಇನ್ನೂ ಕನ್ನಡ ಸಂಸ್ಕೃತಿ ಬಗ್ಗೆ ಹೇಳಬೇಕೆ? ಗಂಡು ಮಕ್ಕಳಂತೆ ಬಟ್ಟೆ ಧರಿಸಿ ನಾನು ಗಂಡಿಗಿಂತ ಕಡಿಮೆಯಿಲ್ಲ ಎಂದು ಸ್ಪರ್ಧಿಸಲು ನಿಂತಿರುವ ಹೆಣ್ಣುಮಕ್ಕಳು ಹೆಚ್ಚಿದ್ದಾರೆ.. ಕನ್ನಡತಿಯಂತೆ ಕಾಣುವ ಹೆಣ್ಣು ಮಕ್ಕಳು ಎಲ್ಲಿದ್ದಾರೋ? ಇದುವರೆಗೆ ಅಲ್ಪಸ್ವಲ್ಪ ಕನ್ನಡ ಉಳಿದಿರುವ ಹಳ್ಳಿಗಾಡಿನ ಪ್ರದೇಶದಲ್ಲೂ ನಾನು ಅವರನ್ನು ನೋಡಿಲ್ಲ.. ಇಲ್ಲೇ ಹೀಗೆ ಎಂದರೆ ನಗರ ಮುಂದುವರಿದ ನಗರ ಪ್ರದೇಶದಲ್ಲಿ..? ಇನ್ನೂ ಮುಂತಾದ ಸಂಸ್ಕೃತಿಗೆ ಧಕ್ಕೆ ತರುವ ಕಾರ್ಯಗಳಿವೆ...

ಇಲ್ಲಿ ಕೆಲವು ಕಠಿಣ ಕನ್ನಡ ಪದಗಳನ್ನು ಬರೆಯಲು ಬಾರದವರಿದ್ದಾರೆ.. ಕನ್ನಡ ಧ್ವಜವನ್ನೇ ನೋಡದವರಿದ್ದಾರೆ.. ಕನ್ನಡವೇ ಬೇಡ ಎನ್ನುವ ತಂದೆ-ತಾಯಿಯರಿದ್ದಾರೆ,ಮಕ್ಕಳಿದ್ದಾರೆ.. ಮತ್ತೊಂದು ವಿಷಯ.. ಹಲವಾರು ಕನ್ನಡ ಬ್ಲಾಗಿಗರು ನಮ್ಮಲ್ಲಿದ್ದಾರೆ.. ನಾನು ನೋಡಿದ ಶೇಕಡ ೮೮ ಬ್ಲಾಗಿನಲ್ಲಿ ಕನ್ನಡ ಪದಗಳು ತಪ್ಪು ತಪ್ಪಾಗಿ ಮೂಡಿಬರುತ್ತಿವೆ..

ಇದು ಯಾರ ತಪ್ಪು? ಯಾರ ಶಾಪ? ಯಾರ ಪಾಪ? ಯಾರ ಪುಣ್ಯ?

ಹೀಗಿರುವಾಗ ಪಂಚಕೋಟಿ ಜನರಿರುವ ಕನ್ನಡನಾಡಿನಲ್ಲಿ ನಿಜವಾದ ಕನ್ನಡಿಗರೆಷ್ಟು?


ನಾನು ಬಹಳಷ್ಟು ಕನ್ನಡ ಬ್ಲಾಗಿಗರು ಈ ಬರಹ ಓದಬೇಕೆಂಬ ಸಣ್ಣ ಆಸೆ ಇಟ್ಟುಕೊಂಡಿದ್ದೇನೆ,ದಯವಿಟ್ಟು ಇದನ್ನು ಓದಿದವರು ನಿಮ್ಮ ನೆರೆಯ ಬ್ಲಾಗಿಗರಿಗೂ ತಿಳಿಸುವಿರಾ...

ಮತ್ತೊಮ್ಮೆ ಅಮೋಘವಾಗಿ "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು"

ಮತ್ತೊಮ್ಮೆ "ಕನ್ನಡ ರಾಜ್ಯೋತ್ಸವದ ಶುಭಾಷಯ" ತಿಳಿಸುತ್ತಾ ವಂದಿಸುತ್ತೇನೆ.

--ಧನ್ಯವಾದಗಳು..

ನಾನಾ ....?

ನನ್ನ ಫೋಟೋ
"ಜಗತ್ತಿನ ನಾಟಕರಂಗದಲ್ಲಿ ವಿಧಿಯ ಬರವಣಿಗೆಯನ್ನು ಮೀರುವವರು ಯಾರು?" ಅಂತ ಧೃಡವಾಗಿ ನಂಬಿರುವವನು ನಾನು! ನನ್ನಿಂದ ಏನೇ ಆದರೂ ಅದು ನಾನು ಮಾಡಿದ್ದಲ್ಲ,ನನ್ನ ಹಣೆಯಲ್ಲಿ ಬರೆದಿದ್ದುದು ಎಂದು ಹೇಳುವವನು ನಾನು.ಪುಂಗಿ ನಾದಕ್ಕೆ ತಲೆದೂಗಿ ನಡೆವ ನಾಗರಹಾವಂತೆ ,ವಿಧಿ ತೋರ್ಸೋ ದಾರಿಯಲ್ಲಿ ತಲೆ ತಗ್ಗಿಸಿ ನಡೆವ... ನಾನು ಹಣೆಬರಹದ ಮುಂದೆ ಏನು ಮಾಡಕ್ಕಾಗಲ್ಲ,ಹಣೆಲಿ ಏನ್ ಬರೆದಿರೋತ್ತು ಹಾಗೆ ಆಗಲೇ ಬೇಕು ಅದನ್ನ ಬದಲಾಯಿಸಲು ಹರಿ-ಬ್ರಹ್ಮಾದಿಗಳಿಂದಲೂ ಸಾದ್ಯವಿಲ್ಲ ಎಂಬುದು ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಮನಸ್ಸು ಮಾಡಿದ್ರೆ ಏನು ಮಾಡಕ್ಕಾಗಲ್ಲ ,ಹಣೆಯಲ್ಲಿ ಬರೆದಿರಬೇಕು ಅನ್ನುವಷ್ಟರ ಮಟ್ಟಿಗೆ ನಾನು ತಲುಪಿದ್ದೇನೆ. ಯಾಕೆಂದರೆ.. ವಿಧಿಗೆ ಸವಾಲ್ ಹಾಕಿ ಕಂಡಿದ್ದು ಬರೀ ಸೋಲಿನ ಸಾಲು........ ನನ್ನೊಂದಿಗೆ:hanebaraha@gmail.com